ಬೇನವೇಂಟೆ, ಹಾತೀಂ ತೊ
1866-1954. ಸ್ಟ್ಯಾನಿಷ್ ನಾಟಕಕಾದ ನೊಬೆಲ್ ಪಾರಿತೋಷಿಕ ವಿಜೇತ. ಮ್ಯಾಡ್ರಿಡ್‍ನಲ್ಲಿ ಜನನ. ಮ್ಯಾಡ್ರಿಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಗೆ ಓದುತ್ತಿದ್ದಾಗಲೇ ನಾಟಕದ ಗೀಳುಹಿಡಿದು ವ್ಯಾಸಂಗಕ್ಕೆ ಶರಣು ಹೊಡೆದ. 1894ರಲ್ಲಿ ಬರೆದು ಪ್ರದರ್ಶಿಸಿದ ಮೊದಲ ನಾಟಕ ಎಲ್ ನಿಡೊ ಎಜೇನೊ ಯಶಸ್ವಿಯಾಗಲಿಲ್ಲ. 1896ರಲ್ಲಿ ಪ್ರದರ್ಶಿತವಾದ ಜೆಂಟಿ ಕೊನೊಸಿಡಾ ಎಂಬ ನಾಟಕ ಉತ್ತಮ ಎನಿಸಿತು. ಅನಂತರ ರಂಗದ ಮೇಲೆ ಬಂದ ಲಾ ಕಾಮಿಡಾ ಡೆ ಲಾ ಫಿಯಾರಸ್ (1898) ಎಂಬ ನಾಟಕ ಪ್ರಚಂಡ ಯಶಸ್ಸುಗಳಿಸಿತು. ಸ್ಟೇನ್ ನಾಟಕ ರಂಗದಲ್ಲಿ ಆ ತನಕ ಜೋಸೆ ಎಖೆಗಾರೆಯ ರಕ್ತಪಾತ ಆರ್ಭಟಗಳಿಂದ ತುಂಬಿದ ನಾಟಕಗಳೇ ಕಾಣುತ್ತಿದ್ದುವು. ಬೇನವೇಂಟೆಯ ಸೌಮ್ಯ ಸಾಮಾಜಿಕ ವೈಚಾರಿಕ ನಾಟಕಗಳು ಹೊಸ ಅಲೆಯಾಗಿ ಕಂಡುವು. ಪ್ರೋತ್ಸಾಹಿತನಾದ ಬೇನವೇಂಟೆ ಅನಂತರ 22 ನಾಟಕಗಳನ್ನು ಬರೆದು ಆಡಿಸಿದ. ಎಲ್ಲವೂ ಸಮಾಜದಲ್ಲಿಯ ದೋಷಗಳಿಗೆ ಹಿಡಿದ ಭೂತಗನ್ನಡಿಯಾದುವು. ಸ್ವಂತ, ನಾಟಕಗಳನ್ನು ರಚಿಸುವುದರ ಜೊತೆಗೆ ತಾನು ಮೆಚ್ಚಿದ ಷೇಕ್ಸ್‍ಪಿಯರ್, ಇಬ್ಸೆನ್ ಮತ್ತು ಮೋಲಿಯರ್‍ರ ಕೆಲವು ನಾಟಕಗಳನ್ನೂ ಅನುವಾದಿಸಿದ. ಫ್ರಾನ್ಸಿನ ಹೆನ್ರಿ ಲಾವ್‍ಡಾನ್ ಈತನ ಆದರ್ಶ ನಾಟಕಕಾರ. 

	1903ರಲ್ಲಿ ರಚಿತನಾದ ಲಾ ನೋಖೆಡಿ ಸಬಾಡೊ ಹೊಸ ತಿರುವು ಪಡೆಯಿತು. ವಾಸ್ತವತೆ, ವಿಡಂಬೆನಗಳ ಮೊನಚು ತಗ್ಗಿ ಪ್ರಗತಿ ಪರವಾದ ನಾಟಕ ಸರಣಿ ಆರಂಭವಾಯಿತು. ಲೋಸ್ ಮಾಲ್ಹೆ ಖೋರಸ್ ಡಿ ಬಿಯನ್, ಲೋಸ್ ಇಂಟರೆಸಿಸ್ ಕ್ರಿಯಾಡೊಸ್ ಇವು ಶ್ರೇಷ್ಠ ನಾಟಕಗಳಿನಿಸಿದುವು. ಸೊನೋರಾ ಅಮಾ ಈತನ ಮ್ಮೆಚ್ಚಿನ ನಾಟಕ. ಗ್ರಾಮೀಣ ಸತಿಯೊಬ್ಬಳ ಸುತ್ತ ಹೆಣೆದ ಕತೆ, ಮನೋವೈಜ್ಞಾನಿಕ ದೃಷ್ಟಿಯಿಂದ ನಿರೂಪಿತವಾದದ್ದು. ದಿ ಪ್ಯಾಷನ್ ಫ್ಲವರ್ (ಇಂಗ್ಲಿಷಿಗೂ ಅನುವಾದಗೊಂಡಿದೆ) ನಾಟಕ ಅತ್ಯಂತ ಜನಪ್ರಿಯವಾಯಿತು. ಕೃಷಿಕ ಜೀವನವನ್ನು ಕುರಿತ ಈ ದುರಂತ ನಾಟಕವನ್ನು ನೋಡಿ ಮನಕರಗದವರಿಲ್ಲ. ಈಚೆಗೆ ಇದು ಚಲನ ಚಿತ್ರವೂ ಆಗಿದೆ. 

	ದಿ ಬ್ಯಾಂಡ್ಸ್ ಆಫ್ ಇಂಟರೆಸ್ಟ್ ಪ್ರಯೋಗವಾದಾಗ ಬೇನವೇಂಟೆ ಕೀರ್ತಿ ಶಿಖರ ಮುಟ್ಟಿತು. ಇದರಲ್ಲಿ ಹಾಸ್ಯ ವಿಡಂಬನೆ ಆದರ್ಶ ಹದವಾಗಿ ಬೆರೆತಿವೆ. ಇದರ ಅನಂತರ ಐವತ್ತು ನಾಟಕಗಳನ್ನು ಬರೆದರೂ ಇದರ ಮಟ್ಟಕ್ಕೆ ಯಾವುವೂ ಬರಲಿಲ್ಲ. ಈತ ಲಾವಿಡಾ ಲಿಟರೇರಿಯಾ ಮಾಸಿಕ ಪತ್ರಿಕೆಯ ಸಂಪಾದಕನೂ ಆಗಿದ್ದ. 

	1909ರಲ್ಲಿ ಮಕ್ಕಳ ರಂಗಭೂಮಿ ಸ್ಥಾಪಿಸಿದ. ಮಕ್ಕಳಿಗಾಗಿಯೇ ಹಲವಾರು ನಾಟಕಗಳನ್ನು ಬರೆದ. 1922ರಲ್ಲಿ ನೊಬೆಲ್ ಪಾರಿತೋಷಿಕ ಪಡೆದ. 1928ರಲ್ಲಿ ಬರೆದ ಪಾರಾ ಎಲ್ ಸಿಯಾಲೋ ವೈ ಲೋಸ್ ಆಲ್ಟಾರೆಸ್ ಎಂಬ ನಾಟಕ ಸ್ಪೇನ್ ಅರಸರ ಪತನದ ಭವಿಷ್ಯವನ್ನು ಸೂಚಿಸುವುದಾಗಿತ್ತು. ಇದರಿಂದಾಗಿ ಈತ ಬಹಿಷ್ಕಾರ ವಿಪತ್ತಿಗೆ ಗುರಿಯಾದ. 1941ರಲ್ಲಿ ಬರೆದ ಲೊ ಇಂಕ್ರೀಬಲ್ ಎಂಬ ನಾಟಕ ಮತ್ತೆ ರಾಜಾನುಗ್ರಹ ತಂದು ಕೊಟ್ಟಿತು. ಸ್ಪ್ಯಾನಿಷ್ ರಾಯಲ್ ಅಕಾಡೆಮಿಯ ಸದಸ್ಯತ್ವದ ಮನ್ನಣೆ ದೊರೆತ ಮೇಲೆ ಆಗಲೇ ಬರಡಾಗುತ್ತಿದ್ದ ಈತನ ಸೃಜನ ಶಕ್ತಿ ಪೂರ್ಣವಾಗಿ ಬತ್ತಿಹೋಗಿತ್ತು. 				
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ